Tuesday, August 14, 2007

ಬಾಲ್ಯದ ಆ ನೆನಪು...

ಗೋಪಾಲಕೃಷ್ಣ ಅಡಿಗರ "ನೆನಪಿನ ಗಣಿಯಿಂದ"ಆತ್ಮಕಥನ ಓದುತಿದ್ದ ನನಗೆ ನನ್ನ ಬಾಲ್ಯದ ಕೆಲವು ಘಟನೆಗಳು ನೆನಪಾದವು...ಅವುಗಳಲ್ಲಿ ಒಂದು ಹೀಗಿದೆ...
ನಾನು ಒಂದರಿಂದ ಮೂರನೆಯ ತರಗತಿಯವರೆಗೆ ಓದಿದ್ದು ನನ್ನ ಅಜ್ಜಿಯಮನೆಯಲ್ಲಿ(ಹೂವಿನಮನೆ).ಹುಟ್ಟಿದ್ದು ಕೂಡ ಅಲ್ಲೆ..ನಾನು ಅಜ್ಜಿಯ ಮನೆಯಿಂದ ವಾರಕ್ಕೊಮ್ಮೆ ಹೆಚ್ಚೆಂದರೆ 15 ದಿನಕ್ಕೊಮ್ಮೆಯಾದರು ಮನೆಗೆ(ನಾಣಿಕಟ್ಟ) ಬರಲೇ ಬೇಕಿತ್ತು.ನನ್ನನ್ನು ಮನೆಗೆ ಕರೆದುಕೊಂಡು ಹೋಗಲು ಒಬ್ಬರು, ಮತ್ತೆ ಅಜ್ಜಿಯಮನೆಗೆ ಕಳುಹಿಸಲು ಒಬ್ಬರು ನನ್ನ ಜೊತೆ ಬರಬೇಕಿತ್ತು.ಹಾಗೆ ಮನೆಗೆ ಹೋದವಳು 1 ವಾರ ಉಳಿದು ಬರುತ್ತಿದ್ದೆ.ಹೋದಾಗ ಎಲ್ಲರು ನನ್ನನ್ನು ಮಾತಾಡಿಸುವುದು,ನನಗೆ ಪ್ರಾಮುಖ್ಯತೆ ಕೊಡುವುದು ಇದೆಲ್ಲ ನೋಡಿ ನನಗೆ ಬಹಳ ಸಂತೋಷವಾಗುತಿತ್ತು.ಹಾಗೆ ಮನೆಯಿಂದ ಎಲ್ಲರನ್ನು ಬಿಟ್ಟು ಅಜ್ಜಿಯಮನೆಗೆ ಹೋಗಲು ಬಹಳ ಬೇಸರ...ಹೋಗಿ ಒಂದೆರಡು ದಿನ ಬೇಸರವಿರುತ್ತಿತು .
ಒಮ್ಮೆ ಹೀಗೆ ಮನೆಗೆ ಬಂದವಳನ್ನು ವಾಪಸ್ ಅಜ್ಜಿಯಮನೆಗೆ ಕಳುಹಿಸಲು ನನ್ನ ಚಿಕ್ಕಪ್ಪ ಬಂದರು.ನಾನು ಆಗಲೇ ಬಹಳ ದಿನ ಮನೆಯಲ್ಲಿದ್ದು ಅಜ್ಜಿಯಮನೆಗೆ ಹೋದವಳು.ಅಲ್ಲಿಗೆ ಹೋಗುವತನಕ ಸಂಜೆಯಾಯಿತು.ಅಂದು ಚಿಕ್ಕಪ್ಪ ನನ್ನ ಜೊತೆ ಅಲ್ಲಿಯೆ ಇದ್ದರು.ಬೆಳಿಗ್ಗೆ ಎದ್ದು ನಾನು ಶಾಲೆಗೆ ಹೋದೆ.11.30 ಕ್ಕೆ ಮನೆಗೆ ಊಟಕ್ಕೆ ಹೋಗಲು ಬೆಲ್ಲ್ ಆಯಿತು(11.30 ಯಿಂದ 1.30 ತನಕ ವಿರಾಮವಿರುತ್ತಿತ್ತು)ಕ್ಲಾಸ್ ನಿಂದ ಹೊರಗೆ ಬಂದ ನನಗೆ ಬಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಾ ನಿಂತ ನನ್ನ ಚಿಕ್ಕಪ್ಪ ಕಾಣಿಸಿದರು.ಯಾಕೆ ಹಾಗೆ ಅನಿಸಿತೋ ಗೊತ್ತಿಲ್ಲ ಮತ್ತೆ ಅವರ ಜೊತೆ ವಾಪಸ್ ಮನೆಗೆ ಹೋಗುವ ಮನಸ್ಸಾಯಿತು!!!(ಕಳುಹಿಸಲು ಬಂದವರ ಜೊತೆ ಮತ್ತೆ ವಾಪಸ್ ಹೋಗುವ ವಿಚಾರ!!!)
ಶಾಲೆಯಿಂದ ಓಡಿ ಮನೆಗೆ ಹೋದೆ.ಬಸ್ ಬಂದು ಚಿಕ್ಕಪ್ಪ ಹೋದರೆ ಎನ್ನುವ ಭಯ!ಯೂನಿಫಾರ್ಮ್ ಬದಲಿಸಿ ಹೊಸ ಅಂಗಿ!(dress) ಹಾಕಿಕೊಳ್ಳುತ್ತಿದ್ದ ನನ್ನನ್ನು ಅಜ್ಜಿ ಕೇಳಿದರು....ಎಲ್ಲಿಗೆ ಹೋಗುತ್ತಿದ್ದೀಯಾ?ಏನಾಯಿತೆಂದು.ಅವರಿಗೆ ಉತ್ತರಿಸುವಷ್ಟು ಸಮಯ ನನ್ನಲ್ಲಿರಲಿಲ್ಲ....ಅಂದರೂ ಹೆಳಿದೆ..ಚಿಕ್ಕಪ್ಪನ ಜೊತೆ ಮನೆಗೆ ಹೋಗುತ್ತಿದ್ದೇನೆ ಎಂದು.
ಮತ್ತೆ ಓಡಿ ಬಸ್ ಸ್ಟ್ಯಾಂಡ್ ಗೆ ಹೋದೆ.ದೂರದಿಂದಲೆ ಬಸ್ ಸ್ಟ್ಯಾಂಡ್ ನಲ್ಲಿ ಇಬ್ಬರು ನಿಂತಿರುವುದು ಕಾಣಿಸಿತು...ನನ್ನ ಚಿಕ್ಕಪ್ಪ ಮತ್ತು ಅವರನ್ನು ಕಳುಹಿಸಲು ಬಂದ ನನ್ನ ಮಾವ.ಅಷ್ಟು ಓಡಿ ದಣಿದಿದ್ದ ನನಗೆ ಅವರನ್ನು ನೋಡಿ ಬಹಳ ಖುಷಿಯಾಯಿತು.ಬಸ್ ಸ್ಟ್ಯಾಂಡ್ ಗೆ ಬಂದ ನನ್ನನ್ನು ನೋಡಿದ ಚಿಕ್ಕಪ್ಪ ಅಚ್ಚರಿಯಿಂದ ಕೇಳಿದರು......ಯಾಕೆ ಮರಿ,ಮತ್ತೆ ಯಾಕೆ ಬಂದೆ? ಎಂದು.ಅದಕ್ಕೆ ನಾನಂದೆ..ಇಲ್ಲ ಚಿಕ್ಕಪ್ಪ ನಾನು ನಿಮ್ಮ ಜೊತೆ ವಾಪಸ್ ಮನೆಗೆ ಬರುತ್ತೇನೆ!!!ಬೇಡ ಎಂದು ಎಷ್ಟು ಹೇಳಿದರು ಬರುತ್ತೇನೆ ಎಂದು ಹಠ! ಆ ಚರ್ಚೆ ನಡೆಯುತ್ತಿದ್ದಾಗಲೆ ಬಸ್ ಬಂದಿತು.ಬಸ್ ನೋಡಿದ ನನಗೆ ಬಹಳ ಸಂತೋಷ.ಹಠ ಮಾಡಿ ಬಸ್ ಹತ್ತಿದರೆ ಮನೆ ತಲುಪಬಹುದು ಎಂದು!ಸ್ವಲ್ಪ ಕೋಪದಲ್ಲಿಯೆ ಚಿಕ್ಕಪ್ಪ "ಸರಿ ಬರುವುದಾದರೆ ಬಾ"ಎಂದು ನನ್ನ ಕೈ ಹಿಡಿದು ಬಸ್ ಹತ್ತಿದರು.ನಾನು ಖುಷಿಯಿಂದ ಬಸ್ ಹತ್ತಿದೆ! ನಾನು ಇನ್ನು ಒಂದನೇ ಮೆಟ್ಟಿಲಲ್ಲಿದ್ದೆ, ಆಗ ನನ್ನ ಮಾವ "ಹೋಗುವುದು ಬೇಡ"ಎಂದು ನನ್ನನ್ನು ಗದರಿಸಿ ಬಸ್ ನಿಂದ ಕೆಳಗಿಳಿಸಿದರು.ತುಂಬಾ ಬೇಸರವಯಿತು...ಅಳುತ್ತಾ ಅಜ್ಜಿಯ ಮನೆಯ ಕಡೆಗೆ ಹೋದೆ!!!
"ಕೈ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ"ಎಂಬ ಮಾತಿಗೆ ಇದೆ ಉದಾಹರಣೆ ಕೊಡಬಹುದಲ್ಲವೆ? ನನ್ನ ಚಿಕ್ಕಪ್ಪ ಆಗಾಗ ಈ ಘಟನೆಯನ್ನು ನೆನಪಿಸುತ್ತಿರುತ್ತಾರೆ.ಆದ್ದರಿಂದ ಸರಿಯಾಗಿ ನೆನಪಿದೆ. ನನ್ನ ಚಿಕ್ಕಪ್ಪ ನನ್ನ ಮೇಲೆ ಒಂದು ಹಾಡು ಕಟ್ಟಿ ಹೇಳುತ್ತಿದ್ದರು. ಅದು ಹೀಗಿದೆ"ಎನ್ನ ಅಪ್ಪಯ್ಯಂಗೆ ಆನೇ ಮುದ್ದಿನ ಮಗಳು,
ಎಂಟೆಂಟು ದಿವಸಕ್ಕೆ ಕಳುಹಲೇ ಬೇಕು"

(ಮುಂದೆ ಏನು ಎಂದು ಸರಿಯಾಗಿ ನೆನಪಿಲ್ಲಾ)
ಚೇತನಾ ರೋಹಿತ್

Read More...

Thursday, August 2, 2007

ಹೀಗೊಂದು ಕತೆ

ನನಗೆ ಇಷ್ಟವಾದ ಕತೆಗಳಲ್ಲಿ ಒಂದು ...
ಒಮ್ಮೆ ಒಂದೂರಿನಲ್ಲಿ ಎಲ್ಲಾ ದೇವರ ಸಭೆ ನಡೆಯಿತು.ಎಲ್ಲಾ ದೆವರು ತಮ್ಮ ತಮ್ಮ ವಾಹನದಲ್ಲಿ ಆ ಸಭೆಗೆ ಬಂದರು...ಗಣಪತಿ ಇಲಿಯ ಮೇಲೆ,ಯಮ ಕೋಣನ ಮೇಲೆ ಹೀಗೆ....
ಯಮರಾಜ ಸಭೆಯ ಒಳಗೆ ಹೋಗುವ ಮುನ್ನ ಒಮ್ಮೆ ಮೇಲೆ ನೋಡಿದ..ಅಲ್ಲಿ ಅವನಿಗೆ ಒಂದು ಹದ್ದು ಮತ್ತು ಒಂದು ಗುಬ್ಬಚ್ಚಿ ಕಾಣಿಸಿದವು.ಹಾಗೆ ಒಮ್ಮೆ ಅವನ್ನು ನೋಡಿ ಯಮರಾಜ ಸಭೆಯೊಳಗೆ ಹೋದ.
ಯಮರಾಜ ಗುಬ್ಬಚ್ಚಿಯನ್ನು ನೋಡಿದ ದೃಷ್ಟಿ ಹದ್ದಿಗೆ ಯಾಕೊ ಸರಿ ಕಾಣಲಿಲ್ಲ.ಅನುಮಾನ ಬಂತು.ಅದು ಗುಬ್ಬಚ್ಚಿಯ ಹತ್ತಿರ ಹೇಳಿತು...'ಗುಬ್ಬಚ್ಚಿ ಯಮ ನಿನ್ನನ್ನು ನೋಡಿದ ರೀತಿ ಯಾಕೊ ಸರಿ ಕಾಣಲಿಲ್ಲಾ.ಅವನು ನಿನ್ನ ನೋಡಿದ ರೀತಿ ನಿನ್ನ ಪ್ರಾಣಪಕ್ಷಿಯನ್ನು ಕೊಂಡೊಯ್ಯಲು ನೋಡಿದಂತಿತ್ತು.ಒಂದು ಉಪಾಯ ಮಾಡೋಣ...ನಾನು ನಿನ್ನನ್ನು ಹಿಮಾಲಯ ಪರ್ವತದಲ್ಲಿರುವ ಒಂದು ಗುಹೆಯಲ್ಲಿ ಬಿಟ್ಟು ಬರುತ್ತೇನೆ.ನೋಡೋಣ ಅವನು ನಿನ್ನನ್ನು ಹೇಗೆ ಕೊಂಡೊಯ್ಯುವನೆಂದು'
ಗುಬ್ಬಚ್ಚಿಗೆ ಹದ್ದಿನ ಮಾತು ಸರಿಯೆನಿಸಿ ಅದರ ಸಲಹೆಗೆ ತಲೆಯಾಡಿಸಿತು .ಹದ್ದು ತಾನು ಹೇಳಿದಂತೆ ಹಿಮಾಲಯದಲ್ಲಿ ಗುಬ್ಬಿಯನ್ನು ಬಿಟ್ಟು ಬಂದಿತು.
ಇತ್ತ ಯಮರಾಜ ಸಭೆಯಿಂದ ಹೊರಗೆ ಬಂದು ಗುಬ್ಬಚ್ಚಿಯು ಅಲ್ಲೆ ಇದೆಯೇ ಎಂದು ಮೇಲೆ ನೋಡಿದ.ಆಗ ಹದ್ದು 'ಯಮರಾಜ ಅಲ್ಲಿ ಏನನ್ನು ಹುಡುಕುತ್ತಿದ್ದಿಯಾ?ನಿನಗೆ ಗುಬ್ಬಚ್ಚಿ ಸಿಗುವುದಿಲ್ಲಾ.ನಾನು ಅದನ್ನು ಹಿಮಾಲಯದ ಒಂದು ಗುಹೆಯಲ್ಲಿ ಬಿಟ್ಟು ಬಂದಿದ್ದೆನೆ."ಎಂದು ಹೆಮ್ಮೆಯಿಂದ ಹೇಳಿತು.
ಹದ್ದಿನ ಮಾತಿಗೆ ಉತ್ತರವಾಗಿ ಯಮರಾಜ ಹೆಳಿದ"ನಾನೂ ಆ ಗುಬ್ಬಚ್ಚಿಯನ್ನು ನೊಡಿ ಅದನ್ನೆ ಯೋಚಿಸುತಿದ್ದೆ....ಅದರ ಹಣೆಯಲ್ಲಿ ಹಿಮಾಲಯದ ಒಂದು ಗುಹೆಯಲ್ಲಿ ಒಂದು ಬೆಕ್ಕಿನಿಂದ ಸಾವು ಎಂದು...ಗುಬ್ಬಚ್ಚಿ ನೋಡಿದರೆ ಇನ್ನು ಇಲ್ಲೆ ಇತ್ತು.ಇಷ್ಟು ಅಲ್ಪಾವದಿಯಲ್ಲಿ ಅದು ಹೇಗೆ ಸಾಧ್ಯ ಎಂದು.ಈಗ ನನಗೆ ಎಲ್ಲವು ಅರ್ಥವಾಯಿತು ಎಂದು"
ಹದ್ದು ತಾನು ಮಾಡಿದ ಕೆಲಸಕ್ಕಾಗಿ ಪಶ್ಚಾತ್ತಾಪ ಪಟ್ಟಿತು ಮತ್ತು ಗುಬ್ಬಚ್ಚಿಯ ಸಾವು ನೆನೆದು ಮರುಗಿತು!

Read More...